ಜನವರಿ 24, 2015ರಂದು ಜರುಗಿದ ತುಮಕೂರು ವಿಶ್ವವಿದ್ಯಾನಿಲಯದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ. ಎ. ಎಸ್. ಕಿರಣ್ ಕುಮಾರ್, ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮು ಹಾಗೂ ಕನ್ನಡದ ಹಿರಿಯ ಬರಹಗಾರ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆದ ಶ್ರೀ ವಜುಭಾಯಿ ವಾಲಾ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿಯಿತ್ತು ಗೌರವಿಸಿದರು.
|
ಹಿರಿಯ ವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮು ಅವರಿಗೆ ಗೌರವ ಡಾಕ್ಟರೇಟ್ |
|
ಇಸ್ರೋ ಅಧ್ಯಕ್ಷ ಡಾ. ಎ. ಎಸ್. ಕಿರಣ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ |
ಈ ಘಟಿಕೋತ್ಸವದಲ್ಲಿ ಒಬ್ಬ ಅಭ್ಯರ್ಥಿ ಡಿ.ಲಿಟ್., ಒಬ್ಬ ಅಭ್ಯರ್ಥಿ ಪಿಎಚ್.ಡಿ., 1208 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 7297 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಿದ್ದರು. ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ‍್ಯಾಂಕುಗಳನ್ನು, ಬಿಎ/ಬಿಎಸ್‌ಡಬ್ಲ್ಯೂ/ಬಿಎಸ್‌ಸಿ/ಬಿಸಿಎ/ಬಿಕಾಂ/ ಬಿಬಿಎಂ/ಬಿಇಡಿ (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ‍್ಯಾಂಕುಗಳನ್ನು, ಬಿಎಫ್‌ಎ (ಸೆಮಿಸ್ಟರ್ ಪದ್ಧತಿ)ಗೆ ಐದು ರ‍್ಯಾಂಕುಗಳನ್ನು ಬಿ.ಪಿ.ಇಡಿ (ಸೆಮಿಸ್ಟರ್ ಪದ್ಧತಿ) ಹಾಗೂ ಬಿಎ (ವಾರ್ಷಿಕ ಪದ್ಧತಿ)ಗಳಿಗೆ ತಲಾ ಐದು ರ‍್ಯಾಂಕುಗಳನ್ನು, ಬಿಕಾಂ (ವಾರ್ಷಿಕ ಪದ್ಧತಿ)ಗೆ ಮೂರು ರ‍್ಯಾಂಕುಗಳನ್ನು ಹಾಗೂ ಬಿಎ ಇಂಟಗ್ರೇಟೆಡ್ ಕನ್ನಡ ಪಂಡಿತ್‌ಗೆ ಮೂರು ರ‍್ಯಾಂಕುಗಳನ್ನು ನೀಡಲಾಯಿತು. ನಾಡಿನ ವಿವಿಧ ದಾನಿಗಳು ಸ್ಥಾಪಿಸಿರುವ ದತ್ತಿನಿಧಿಗಳ 56 ಚಿನ್ನದ ಪದಕಗಳೂ ಸೇರಿದಂತೆ ಒಟ್ಟು 73 ಚಿನ್ನದ ಪದಕಗಳನ್ನು ಹಾಗೂ ನಾಲ್ಕು ನಗದು ಬಹುಮಾನಗಳನ್ನು ರಾಜ್ಯಪಾಲರು ಪ್ರದಾನ ಮಾಡಿದರು.
|
ಹಿರಿಯ ಸಾಹಿತಿ ಪ್ರೊ, ಬರಗೂರು ರಾಮಚಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ |
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದ ಉಪಾಧ್ಯಕ್ಷ ಪ್ರೊ. ಎಚ್ ದೇವರಾಜ್, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎ. ಎಚ್. ರಾಜಾಸಾಬ್, ಕುಲಸಚಿವ (ಪರೀಕ್ಷಾಂಗ) ಪ್ರೊ. ಎನ್. ಬಿ. ನಡುವಿನಮನಿ, ಅಕಡೆಮಿಕ್ ಕೌನ್ಸಿಲ್ ಹಾಗೂ ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯಗಳ ಡೀನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದ ಉಪಾಧ್ಯಕ್ಷ ಪ್ರೊ. ಎಚ್ ದೇವರಾಜ್ ಮಾಡಿದ ಘಟಿಕೋತ್ಸವ ಭಾಷಣದ ಮುಖ್ಯಾಂಶಗಳು ಇಲ್ಲಿವೆ:
|
ಘಟಿಕೋತ್ಸವ ಭಾಷಣ: ಜಿಸಿ ಉಪಾಧ್ಯಕ್ಷ ಪ್ರೊ. ಎಚ್. ದೇವರಾಜ್ |
- ಶ್ರಮ ಮತ್ತು ಸಾಧನೆ ಇಲ್ಲದ ಬರಿಯ ಆಸೆ ಮತ್ತು ಬಯಕೆ ಎಂದೂ ನಮ್ಮನ್ನು ಸಾಧಕರನ್ನಾಗಿಸುವುದಿಲ್ಲ. ಸಾಧನೆ ಒಂದು ಮಹತ್ವದ ಗುಣ. ಬುದ್ಧಿವಂತಿಕೆ ಎಂಬುದು ಪರಿಶ್ರಮ ಮತ್ತು ಸಹಿಷ್ಟಣತೆ, ಚೈತನ್ಯ ಮತ್ತು ಶೌರ್ಯ, ಸಮಾನತೆ ಮತ್ತು ಪಾಂಡಿತ್ಯವನ್ನು ಸಾಧಿಸಲು ಸಹಾಯಕವಾಗಬೇಕು ನೆನಪಿಡಿ. ನಿಮ್ಮ ಕಲಿಕೆಯ ಪಯಣ ನಿಮ್ಮ ಪದವಿಯೊಂದಿಗೆ ಕೊನೆಗೊಳ್ಳುವುದಿಲ್ಲ; ಬದಲಿಗೆ ಪ್ರಾರಂಭವಾಗುತ್ತದೆ. ನೀವು ಇಂದು ಏನನ್ನು ಕಲಿತೀದ್ದೀರೋ ಅದು ನಾಳೆಗೆ ಹಳೆಯದಾಗಿರುತ್ತದೆ. ಆದ್ದರಿಂದ ನಿಮ್ಮ ಜ್ಞಾನವನ್ನು ಸದಾಕಾಲ ವೃದ್ಧಿಸಿಕೊಳ್ಳಿ.
- ಶಿಕ್ಷಣವೆಂಬುದು ಜನರನ್ನು ಅಭಿವೃದ್ಧಿಪಡಿಸುವ ಮತ್ತು ಸಬಲಗೊಳಿಸುವ ಮೊಟ್ಟಮೊದಲ ಸಾಧನ. ಸಾಮಾಜಿಕ ಸಂಸ್ಥೆಗಳ ಗುಣಮಟ್ಟ ಶಿಕ್ಷಣದಿಂದ ಹುಟ್ಟಿದ ಸಾಮರ್ಥ್ಯವನ್ನು ಅವಲಂಬಿಸಿದೆ. ಜ್ಞಾನ ಸಂಪಾದಕರು ಮಾತ್ರ ನಿಜವಾದ ಹೊಸತನವನ್ನು ತರಲು ಸಾಧ್ಯ. ಇದರಲ್ಲಿ ವಿಶ್ವವಿದ್ಯಾನಿಲಯಗಳು ಚಿಂತನಶೀಲರಾದ ಮತ್ತು ಕಾರ್ಯೋನ್ಮುಖರಾದ ಯುವಜನರನ್ನು ತರಬೇತುಗೊಳಿಸುವ ಪ್ರಯೋಗಾಲಯಗಳಿದ್ದಂತೆ.
- ಭಾರತೀಯ ಸಂಪ್ರದಾಯದ ಪ್ರಕಾರ ಶಿಕ್ಷಣ ಎಂಬುದು ಕೇವಲ ಜೀವನ ನಡೆಸುವ ಸಲುವಾಗಿ ಕಲಿಯುವ ಕಸುಬು ಮಾತ್ರವಲ್ಲ. ಅದು ಜೀವನ ನಡೆಸಲು ಬೇಕಾದ ಆತ್ಮಜ್ಞಾನಕ್ಕೆ ಸ್ಪೂರ್ತಿ ನೀಡುವಂತೆಯೂ ಇರಬೇಕು. ಸತ್ಯ ಹಾಗೂ ಶೀಲದ ಬಗ್ಗೆ ಮಾನವರಿಗೆ ದೀಕ್ಷೆ ನೀಡುವಂತೆ ಇರಬೇಕು. ಶಿಕ್ಷಣ ಎನ್ನುವುದು ವೈಯಕ್ತಿಕ ಏಳ್ಗೆ ಮತ್ತು ಸಾಮಾಜಿಕ ಅಭಿವೃದ್ಧಿ ಎರಡಕ್ಕೂ ಪೂರಕವಾಗಿರಬೇಕು. ನಮ್ಮ ಬುದ್ಧಿಯನ್ನು ನಿಶಿತಗೊಳಿಸಿ, ನಮ್ಮ ಅನುಭವವನ್ನು ಸೂಕ್ಷ್ಮಗೊಳಿಸಿ, ನಮ್ಮ ಭಾವನಾ ಪ್ರಪಂಚವನ್ನು ವಿಸ್ತರಿಸುಂತಿರಬೇಕು. ಒಟ್ಟಿನಲ್ಲಿ ಮನುಷ್ಯರು ಸಂಪೂರ್ಣ ಬದುಕನ್ನು ಬದುಕಲು, ಒಳಿತನ್ನು ಸಾಧಿಸಲು ಅನುವು ಮಾಡಬೇಕು. ವಿದ್ಯೆಯ ಗುರಿ ಎಂದರೆ, ಪ್ರಪಂಚದ ಬಗೆಗಿನ ಒಂದು ಸುಸಂಬದ್ಧವಾದ ಚಿತ್ರಣವನ್ನು ಬೆಳೆಸುವುದು.
- ಬದುಕಿನ ಮೂಲಭೂತ ಆದರ್ಶಗಳು, ಸತ್ಯಾನ್ವೇಷಣೆಯ ತವಕ ಮತ್ತು ಆಚಾರವಂತಿಕೆಗಳನ್ನು ಪುಸ್ತಕಗಳಲ್ಲಿ ಬರೆದು ಅಂಕುರಿಸಲಾಗುವುದಿಲ್ಲ. ನಮ್ಮ ಆದರ್ಶಗಳು ಮತ್ತು ದೇಶಾಭಿಮಾನ ನಮ್ಮ ಆಚಾರಗಳಲ್ಲಿ ಒಡಮೂಡಬೇಕೇ ವಿನಾ ಬರೀ ಮಾತುಗಳಲ್ಲಲ್ಲ. ಹಾಗಾಗಿ ವಿಶ್ವವಿದ್ಯಾನಿಲಗಳು ಉದಾರ ಮನೋಭಾವದ ಶಿಕ್ಷಣವನ್ನೂ, ಉನ್ನತ ವೈಜ್ಞಾನಿಕ ಸಂಶೋಧನೆಯನ್ನೂ ಜೊತೆಜೊತೆಗೇ ನೀಡಬೇಕು.
- ವೃತ್ತಿಪರ ಶಿಕ್ಷಣ ಮತ್ತು ಸಾಂಸ್ಕೃತಿಕ ಜ್ಞಾನ, ವೈಜ್ಞಾನಿಕ ತಿಳುವಳಿಕೆ ಮತ್ತು ತಾತ್ವಿಕತೆ, ತಾಂತ್ರಿಕ ಕ್ಷಮತೆ ಮತ್ತು ಆಧ್ಯಾತ್ಮಿಕ ಸಾಧನೆ ಎಲ್ಲವನ್ನೂ ಒಟ್ಟೊಟ್ಟಿಗೆ ಸಾಧ್ಯವಾಗಿಸುವ ಜವಾಬ್ದಾರಿ ನಮ್ಮ ವಿಶ್ವವಿದ್ಯಾನಿಲಯಗಳ ಮೇಲಿದೆ. ಜೀವನ ನಡೆಸುವುದಕ್ಕೂ ಮತ್ತು ಬದುಕಲು ಕಲಿಯುವುದಕ್ಕೂ ಹೀಗೆ ಎರಡಕ್ಕೂ ಆಗಿಬರಬೇಕಾದ ಶಿಕ್ಷಣವನ್ನು ನಾವು ನೀಡಬೇಕಿದೆ. ಯುವಕರನ್ನು ಕಲಿಕೆಯ ವಾತಾವರಣದಿಂದ ಕಸುಬಿನ ವಾತಾವರಣಕ್ಕೆ ಒಗ್ಗಿಸುವ ತಾಲೀಮನ್ನೂ ಒದಗಿಸುವುದು ವಿಶ್ವವಿದ್ಯಾನಿಲಯಗಳ ಜವಾಬ್ದಾರಿ.
0 Comments