Ticker

6/recent/ticker-posts

Ad Code

Responsive Advertisement

ತುಮಕೂರು ವಿ.ವಿ.ಯಲ್ಲಿ ಕಥಾಕೀರ್ತನ ರಸಗ್ರಹಣ ಶಿಬಿರ

ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ತುಮಕೂರು: ಕತ್ತಲೆಯನ್ನು ಬೆಳಕನ್ನಾಗಿಸುವ ಶಕ್ತಿ ಕಥಾಕೀರ್ತನೆಗಿದೆ. ಅದನ್ನು ಪುನರುಜ್ಜೀವನಗೊಳಿಸಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಜವಾಬ್ದಾರಿ ಇಂದಿನ ಯುವಜನತೆಗಿದೆ ಎಂದು ತುಮಕೂರು ಹಿರೇಮಠದ ಅಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕೀರ್ತನ ರಂಗ ಬಳಗ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾನಿಲಯದ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಆರಂಭವಾದ ಎರಡು ದಿನಗಳ ರಾಜ್ಯ ಮಟ್ಟದ ಕಥಾಕೀರ್ತನ ರಸಗ್ರಹಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಭಾರತೀಯ ಸಂಸ್ಕೃತಿಯನ್ನು ಕತ್ತಲಿನಿಂದ ಬೆಳಕಿನೆಡೆಗೆ ಚಲಿಸುವ ಪರಿಕಲ್ಪನೆಯೆಂದು ಅರ್ಥೈಸಲಾಗುತ್ತದೆ. ಅದು ಕತ್ತಲನ್ನೂ ಬೆಳಕನ್ನಾಗಿಸುವ ಕ್ರಿಯೆ ಆಗಬೇಕು. ಅಂಥ ಶಕ್ತಿ ಕಥಾಕೀರ್ತನೆಯ ಪ್ರಕಾರಕ್ಕಿದೆ ಎಂದರು.

ಪ್ರಾಚೀನ ಸಮಾಜದಲ್ಲಿ ವಿದ್ಯೆ ಸಮಾಜದ ಒಂದು ವರ್ಗಕ್ಕೆ ಸೀಮಿತವಾಗಿತ್ತು. ಶಿಕ್ಷಣದ ಫಲ ಜನಸಾಮಾನ್ಯರಿಗೂ ಲಭ್ಯವಾಗುವಂತೆ ಮಾಡಿದ್ದು ಹರಿಕಥೆ. ಅದನ್ನು ಉಳಿಸಿಬೆಳೆಸಿಕೊಂಡು ಹೋಗುವುದು ಇಂದಿನ ಅನಿವಾರ್ಯತೆ ಎಂದರು.

ಕಥಾಕೀರ್ತನೆಕಾರರು ಬಹುಮುಖ ಪ್ರತಿಭೆಯುಳ್ಳವರು. ಅವರು ಏಕಕಾಲಕ್ಕೆ ಕವಿ, ಸಾಹಿತಿ, ಸಂಗೀತಕಾರ, ನೃತ್ಯಪಟು, ಅಭಿನಯ ಚತುರರೂ ಆಗಿರಬೇಕು. ಅಂಥವರ ಪರಂಪರೆಯನ್ನು ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಮಾರಂಭವನ್ನು ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎನ್. ಬಿ. ನಡುವಿನಮನಿ ಮಾತನಾಡಿ, ಹರಿಕಥೆ ಒಂದು ಪ್ರಾಚೀನ ಕಲೆಯಾದರೂ ಆಧುನಿಕ ಕಾಲದಲ್ಲೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ ಎಂದರು.

ಕಥಾಕೀರ್ತನೆ ಶಾಸ್ತ್ರ ಹಾಗೂ ಜನಪದದ ಮಿಶ್ರಣ. ಕಾವ್ಯಗಳನ್ನು ಓದುವ ಪದ್ಧತಿಯಿಂದ ಜನಸಾಮಾನ್ಯರು ಕೇಳುವ ವ್ಯವಸ್ಥೆಗೆ ಬದಲಾಯಿಸಿದ ಹಿರಿಮೆ ಅದರದ್ದು. ಅದನ್ನು ಉಳಿಸಿಬೆಳೆಸುವ ಹೊಣೆ ಯುವಜನಾಂಗಕ್ಕಿದೆ ಎಂದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಟಿ. ಜಿ.  ನರಸಿಂಹಮೂರ್ತಿ ಪ್ರಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಸಿ. ವಿ. ಮಹದೇವಯ್ಯ, ಕೀರ್ತನ ರಂಗ ಬಳಗದ ಸಂಸ್ಥಾಪಕ ನರಸಿಂಹದಾಸ್, ತುಮಕೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ. ಡಿ. ವಿ. ಪರಮಶಿವಮೂರ್ತಿ ಉಪಸ್ಥಿತರಿದ್ದರು. ಡಾ. ಅಣ್ಣಮ್ಮ ವಂದಿಸಿದರು. ಪದ್ಮನಾಭ ಕೆ. ವಿ. ಕಾರ್ಯಕ್ರಮ ನಿರೂಪಿಸಿದರು.

Post a Comment

2 Comments

  1. ಉಪಯುಕ್ತ ಮಾಹಿತಿ...ಇದರ ಬಗ್ಗೆ ಹೆಚ್ಹಿನ ವಿವರಗಳಿಗೆ ಯಾರನ್ನು ಸಂಪರ್ಕಿಸಬೇಕು?

    ReplyDelete
    Replies
    1. ನೀವು ಖಂಡಿತವಾಗಿಯೂ ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಪ್ರೊ.ಡಿ.ವಿ. ಪರಮಶಿವಮೂರ್ತಿಯವರನ್ನು ಸಂಪರ್ಕಿಸಬಹುದು. ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಲ್ಲರು.

      Delete