Friday, January 23, 2015

ಡಾ. ಎ. ಎಸ್. ಕಿರಣ್ ಕುಮಾರ್, ಟಿ. ಆರ್. ಅನಂತರಾಮು, ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್

ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಅಧ್ಯಕ್ಷ ಶ್ರೀ ಎ. ಎಸ್. ಕಿರಣ್ ಕುಮಾರ್,  ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮು ಹಾಗೂ ಹಿರಿಯ ಬರಹಗಾರ ಮತ್ತು ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಗಳನ್ನು ಘೋಷಿಸಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಕನ್ನಡಿಗ ಕಿರಣ್ ಕುಮಾರ್ ಅವರಿಗೆ, ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಶ್ರೀ ಅನಂತರಾಮು ಅವರಿಗೆ, ಸಾಹಿತ್ಯ ಮತ್ತು ಸೃಜನಶೀಲ ಮಾಧ್ಯಮ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಪ್ರೊ. ಬರಗೂರು ಅವರಿಗೆ ಈ ಗೌರವ ಸಲ್ಲುತ್ತಿದೆ. ಜನವರಿ 24, 2015ರಂದು ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ನಡೆಯಲಿರುವ ವಿಶ್ವವಿದ್ಯಾನಿಲಯದ 8ನೇ ಘಟಿಕೋತ್ಸವದಲ್ಲಿ ಈ ಪದವಿಗಳನ್ನು ಪ್ರದಾನ ಮಾಡಲಾಗುವುದು. ಇದು ತುಮಕೂರು ವಿ.ವಿ.ಯ ದಶಮಾನೋತ್ಸವ ವರ್ಷ ಎಂಬುದು ಇಲ್ಲಿ ಉಲ್ಲೇಖನೀಯ.

ಡಾ. ಎ. ಎಸ್. ಕಿರಣ್ ಕುಮಾರ್ : ಹಾಸನ ಜಿಲ್ಲೆಯ ಆಲೂರಿನವರಾದ ಡಾ. ಎ. ಎಸ್. ಕಿರಣ್ ಕುಮಾರ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್‍ಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್‍ಸಿ (ಎಲೆಕ್ಟ್ರಾನಿಕ್ಸ್) ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಎಂ.ಟೆಕ್ ಪದವಿ ಪಡೆದರು. 1975ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ)ದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಕಿರಣ್ ಕುಮಾರ್ ಅಲಹಾಬಾದಿನ ಸ್ಪೇಸ್ ಅಪ್ಲಿಕೇಶನ್ ಸೆಂಟರ್‍ನ ನಿರ್ದೇಶಕರಾಗಿ ಇಸ್ರೋದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-1’ ಹಾಗೂ ‘ಮಂಗಳಯಾನ’ (ಮಾಮ್) ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಮೊಟ್ಟಮೊದಲ ದೂರಸಂವೇದಿ ಉಪಗ್ರಹ ‘ಭಾಸ್ಕರ’ದ ಯಶಸ್ಸಿನಲ್ಲೂ ಅವರ ಕೊಡುಗೆ ಗಣನೀಯ. ಇದೇ ಜನವರಿ 12ರಿಂದ ಇಸ್ರೋದ ನೂತನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಕನ್ನಡಿಗ ಕಿರಣ್ ಕುಮಾರ್ ಅವರು ಭಾರತ ಸರ್ಕಾರದ ಪ್ರತಿಷ್ಠಿತ ‘ಪದ್ಮಶ್ರೀ’ ಪುರಸ್ಕೃತರೂ ಆಗಿದ್ದಾರೆ.

ಶ್ರೀ ಟಿ. ಆರ್. ಅನಂತರಾಮು: ತುಮಕೂರಿನ ಸಿರಾ ತಾಲೂಕಿನವರಾದ ಹಿರಿಯ ವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮು ತುಮಕೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಹಳೆವಿದ್ಯಾರ್ಥಿಯೂ ಆಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಭೂವಿಜ್ಞಾನದಲ್ಲಿ ಎಂ.ಎಸ್‍ಸಿ ಪದವಿ ಪಡೆದ ಅವರು 1977ರಲ್ಲಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಹಿರಿಯ ವಿಜ್ಞಾನಿಯಾಗಿ ನಿವೃತ್ತರಾಗಿರುವ ಅನಂತರಾಮು ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಬೆಳೆಸುವಲ್ಲಿ ನೀಡಿರುವ ಕೊಡುಗೆ ಅಪಾರ. ಕನ್ನಡದಲ್ಲಿ ನೂರಕ್ಕೂ ಹೆಚ್ಚು ವಿಜ್ಞಾನ ಸಂಬಂಧೀ ಕೃತಿಗಳನ್ನು ರಚಿಸಿರುವ ಅವರು ಜೆ. ಡಿ. ಬರ್ನಾಲ್ ಅವರ ‘ಸೈನ್ಸ್ ಇನ್ ಹಿಸ್ಟರಿ’ ಬೃಹತ್ ಗ್ರಂಥದ ಕನ್ನಡ ಅನುವಾದದಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಪುರಸ್ಕಾರಗಳು ಅವರಿಗೆ ಸಂದಿವೆ.

ಪ್ರೊ. ಬರಗೂರು ರಾಮಚಂದ್ರಪ್ಪ: ತುಮಕೂರು ಜಿಲ್ಲೆಯ ಬರಗೂರಿನವರಾದ ರಾಮಚಂದ್ರಪ್ಪರವರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಹಳೆವಿದ್ಯಾರ್ಥಿಯೂ ಆಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಮುಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ಸಂಶೋಧಕ, ಸಂಸ್ಕೃತಿ ಚಿಂತಕರಾಗಿ ಪ್ರಸಿದ್ಧರಾಗಿರುವ ಬರಗೂರು ರಾಮಚಂದ್ರಪ್ಪನವರು ಸಿನಿಮಾ ಕ್ಷೇತ್ರಕ್ಕೂ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಿರ್ದೇಶನದ ಸೂರ್ಯ, ಕರಡೀಪುರ, ಶಾಂತಿ ಚಲನಚಿತ್ರಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿವೆ. ತಮ್ಮ ಸಾಹಿತ್ಯ-ಸಂಸ್ಕೃತಿ ಸೇವೆಗಾಗಿ ಪ್ರೊ. ಬರಗೂರು ಅವರು ಪ್ರತಿಷ್ಠಿತ ‘ಪಂಪ ಪ್ರಶಸ್ತಿ’, ‘ನೃಪತುಂಗ ಪ್ರಶಸ್ತಿ’ ಮತ್ತು ‘ನಾಡೋಜ ಪ್ರಶಸ್ತಿ’ಗಳಿಂದ ಪುರಸ್ಕೃತರಾಗಿದ್ದಾರೆ.

No comments:

Post a Comment