Wednesday, January 26, 2011

ಪ್ರಾಥಮಿಕ ಶಾಲಾ ಹಂತದಲ್ಲಿ ಸಂವಿಧಾನ ಶಿಕ್ಷಣ ಅವಶ್ಯಕ: ಪ್ರೊ. ಡಿ. ಶಿವಲಿಂಗಯ್ಯ


ತುಮಕೂರು: ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಭಾರತೀಯ ಸಂವಿಧಾನದ ಕುರಿತ ಪಠ್ಯಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಡಿ. ಶಿವಲಿಂಗಯ್ಯ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯವು ಬುಧವಾರ ಹಮ್ಮಿಕೊಂಡಿದ್ದ ೬೨ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಎಳೆಯವಯಸ್ಸಿನಿಂದಲೇ ಮಕ್ಕಳಿಗೆ ಸಂವಿಧಾನದ ಮಹತ್ವವನ್ನು ಮನಗಾಣಿಸಿ ಅವರಲ್ಲಿ ರಾಷ್ಟ್ರದ ಸಾರ್ವಭೌಮತೆಯ ಅರಿವನ್ನು ಮೂಡಿಸಲು ಸಂವಿಧಾನವನ್ನು ಒಂದು ಪಠ್ಯವನ್ನಾಗಿ ಬೋಧಿಸುವುದೇ ಸೂಕ್ತ ಮಾರ್ಗ ಎಂದರು.
ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್‌ರವರ ನೇತೃತ್ವದಲ್ಲಿ ರೂಪಿತಗೊಂಡ ನಮ್ಮ ಸಂವಿಧಾನವು ಭಾರತದ ಸಾಮಾಜಿಕ ಹಾಗೂ ಆರ್ಥಿಕ ಜೀವನದ ಅಮೂಲಾಗ್ರ ಬದಲಾವಣೆಗೆ ಮೂಲ ಕಾರಣವಾಗಿದೆ ಎಂದು ತಿಳಿಸಿದರು.
ವ್ಯವಸ್ಥಿತ ರಾಷ್ಟ್ರ ಜೀವನಕ್ಕೆ ಅಗತ್ಯವಾದ ಕಾನೂನುಗಳು ಮತ್ತು ಪದ್ಧತಿಗಳೇ ಸಂವಿಧಾನವಾದ್ದರಿಂದ, ಸಂವಿಧಾನವನ್ನು ದೇಶದ ಎಲ್ಲ ಪ್ರಜೆಗಳಿಗೂ ವಿವಿಧ ಹಂತಗಳಲ್ಲಿ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದ ಅವರು, ಸಮಾನತೆಯು ಪ್ರಜಾಪ್ರಭುತ್ವದ ಪ್ರಥಮ ಸೂತ್ರ. ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಯ ಜೊತೆಗೆ ಬದುಕಿನ ಎಲ್ಲ ವಲಯಗಳಲ್ಲೂ ಸಮಾನತೆ ಬರಬೇಕಿದೆ ಎಂದು ವಿಶ್ಲೇಷಿಸಿದರು.
ವ್ಯಕ್ತಿಗತ ಮತ್ತು ಸಾಮಾಜಿಕ ಸ್ವಾತಂತ್ರ್ಯ, ಭ್ರಾತೃತ್ವ ಸಿದ್ಧಾಂತಗಳ ಪ್ರಸಾರ ಮತ್ತು ಅನುಷ್ಠಾನ ಆಗಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ. ನಮ್ಮ ದೇಶವು ಬಹುಧರ್ಮಿಯರನ್ನು, ಬಹು ಸಂಸ್ಕೃತಿಗಳನ್ನು ಒಳಗೊಂಡ ದೇಶವಾಗಿರುವುದರಿಂದ ಪರಧರ್ಮ ಸಹಿಷ್ಣುತೆ, ತಾಳ್ಮೆ, ಸಹಾನುಭೂತಿ, ಸಹಕಾರ ಮನೋಭಾವಗಳನ್ನು ಎತ್ತಿಹಿಡಿಯಬೇಕಾಗಿದೆ ಎಂದರು.
ಪ್ರಭಾರ ಕುಲಸಚಿವ (ಪರೀಕ್ಷಾಂಗ) ಡಾ. ಎಲ್. ಪಿ. ರಾಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಂ. ಜಯರಾಮು, ಹಣಕಾಸು ಅಧಿಕಾರಿ ಶ್ರೀ ಕರಿಯಪ್ಪ, ವಿ.ವಿ. ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ಎನ್. ಹರಿಪ್ರಸಾದ್, ವಿ.ವಿ. ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಎಲ್. ಮುಕುಂದಪ್ಪ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

No comments:

Post a Comment