Friday, February 13, 2015

ಎನ್.ಎಸ್.ಎಸ್.ನಿಂದ ರಕ್ತದ ಗುಂಪು ವರ್ಗೀಕರಣ ಶಿಬಿರ

ನಮ್ಮ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಡೆಯಿಂದ ನಾವೊಂದು ರಕ್ತದಾನ ಶಿಬಿರ ಏರ್ಪಡಿಸಿದರೇನು ಎಂಬ ಯೋಚನೆ ಬಂದಾಗ, ಅದಕ್ಕೂ ಮುನ್ನ ನಮ್ಮ ವಿದ್ಯಾರ್ಥಿಗಳಿಗೆಲ್ಲ ಅವರವರ ಬ್ಲಡ್ ಗ್ರೂಪ್ ಗೊತ್ತಿದೆಯೇ ಎಂಬ ಕುತೂಹಲ ಮೂಡಿತು. ಸುಮ್ಮನೇ ತರಗತಿವಾರು ಒಂದು ಸ್ಥೂಲ ಸರ್ವೇ ಮಾಡಿದೆವು. ಏನಿಲ್ಲವೆಂದರೂ 300ಕ್ಕೂ ಹೆಚ್ಚು ಹುಡುಗ ಹುಡುಗಿಯರಿಗೆ ತಮ್ಮ ರಕ್ತದ ಗುಂಪು ತಿಳಿದಿಲ್ಲ  ಎಂಬುದು ಗೊತ್ತಾಯ್ತು.

ಹಾಗಾದರೆ ಮೊದಲು ಆಗಬೇಕಾದ್ದು ವಿದ್ಯಾರ್ಥಿಗಳಿಗೆ ಆ ತಿಳುವಳಿಕೆ ಕೊಡುವುದು ಎಂದುಕೊಂಡು, ತುಮಕೂರು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಸಹಯೋಗದಲ್ಲಿ ಒಂದು ಶಿಬಿರ ಹಮ್ಮಿಕೊಂಡುಬಿಟ್ಟೆವು. ಕೆಲವೇ ಗಂಟೆಗಳಲ್ಲಿ 305 ಮಂದಿ ಹುಡುಗ-ಹುಡುಗಿಯರು ತಮ್ಮ ರಕ್ತದ ಗುಂಪು ತಿಳಿದುಕೊಂಡುಬಿಟ್ಟರು. ಅದಕ್ಕೂ ಮುನ್ನ ಜಿಲ್ಲಾ ಸರ್ಕಾರಿ ರಕ್ತನಿಧಿಯ ಅಧಿಕಾರಿ ಡಾ. ವೀಣಾ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಜತೆ ಸಂವಾದ ಮಾಡಿದರು.

ಈ ಬಗ್ಗೆ ಪತ್ರಿಕೆಗಳಲ್ಲಿ ಬಂದ ವರದಿ ಹೀಗಿದೆ:


ತುಮಕೂರು: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರಕ್ತದ ಗುಂಪಿನ ಬಗ್ಗೆ ಅರಿವು ಹೊಂದುವುದು ಅವಶ್ಯಕ. ಇದು ಆತನ ವೈಯುಕ್ತಿಕ ಹಾಗೂ ಸಮಾಜದ ಒಟ್ಟಾರೆ ಹಿತದೃಷ್ಟಿಯಿಂದಲೂ ತುಂಬ ಅನಿವಾರ್ಯ ಎಂದು ತುಮಕೂರು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ. ವೀಣಾ ತಿಳಿಸಿದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್‍ಕ್ರಾಸ್ ಹಾಗೂ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ರಕ್ತದ ಗುಂಪು ವರ್ಗೀಕರಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದ ಗುಂಪಿನ ಬಗ್ಗೆ ತಿಳುವಳಿಕೆ ಇದ್ದರೆ ಅದು ಆಪತ್ಕಾಲದಲ್ಲಿ ನಮ್ಮನ್ನು ಕಾಪಾಡುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ರಕ್ತದಾನ ಮಾಡುವುದಕ್ಕೂ ತುರ್ತು ಅವಶ್ಯಕತೆಗಳಿಗೆ ರಕ್ತ ಪಡೆಯುವುದಕ್ಕೂ ಇದರಿಂದ ಸಹಾಯವಾಗುತ್ತದೆ ಎಂದರು.

ಆರೋಗ್ಯವಂತ ಪುರುಷರು ಮೂರು ತಿಂಗಳಿಗೊಮ್ಮೆಯೂ, ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆಯೂ ರಕ್ತದಾನ ಮಾಡಬಹುದು. ರಕ್ತದಾನದಿಂದ ವ್ಯಕ್ತಿಯ ಆರೋಗ್ಯ ಇನ್ನಷ್ಟು ವೃದ್ಧಿಯಾಗುತ್ತದೆಯೇ ಹೊರತು ಯಾವುದೇ ಹಾನಿ ಇಲ್ಲ. ಈ ಬಗ್ಗೆ ಯಾರೂ ಅಪನಂಬಿಕೆ ಬೆಳೆಸಿಕೊಳ್ಳಬಾರದು ಎಂದರು.

ರಕ್ತದಾನದಿಂದ ದೇಹದಲ್ಲಿ ಕೊಲೆಸ್ಟರಾಲ್ ಸಂಗ್ರಹವಾಗುವುದು ತಪ್ಪುತ್ತದೆ. ಹೊಸ ರಕ್ತ ಉತ್ಪಾದನೆಯಾಗುತ್ತದೆ. ರಕ್ತದಾನದಿಂದ ಅಧಿಕ ರಕ್ತದೊತ್ತಡ, ಹೃದಯಾಘಾತದಂತಹ ಗಂಭೀರ ಸಮಸ್ಯೆಗಳನ್ನು ತಡೆಯಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಯರಾಮು ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಬಿ. ಕರಿಯಣ್ಣ ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿಗಳಾದ ಪದ್ಮನಾಭ ಕೆ. ವಿ., ಡಾ. ಚಿಕ್ಕಣ್ಣ ಹಾಗೂ ಕೆ. ಎಸ್. ಗಿರಿಜ ಉಪಸ್ಥಿತರಿದ್ದರು. ಕು. ಅನುಷಾ ಪ್ರಾರ್ಥಿಸಿದರು. ಕು. ಸಂಧ್ಯಾರಾಣಿ ನಿರೂಪಿಸಿದರು. ಸಮಾರಂಭದ ಬಳಿಕ ವಿದ್ಯಾರ್ಥಿಗಳ ರಕ್ತದ ಗುಂಪು ವರ್ಗೀಕರಣ ಕಾರ್ಯಕ್ರಮ ನಡೆಯಿತು.



Thursday, January 29, 2015

ತುಮಕೂರು ವಿ.ವಿ.ಯಲ್ಲಿ ಕಥಾಕೀರ್ತನ ರಸಗ್ರಹಣ ಶಿಬಿರ

ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ತುಮಕೂರು: ಕತ್ತಲೆಯನ್ನು ಬೆಳಕನ್ನಾಗಿಸುವ ಶಕ್ತಿ ಕಥಾಕೀರ್ತನೆಗಿದೆ. ಅದನ್ನು ಪುನರುಜ್ಜೀವನಗೊಳಿಸಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಜವಾಬ್ದಾರಿ ಇಂದಿನ ಯುವಜನತೆಗಿದೆ ಎಂದು ತುಮಕೂರು ಹಿರೇಮಠದ ಅಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕೀರ್ತನ ರಂಗ ಬಳಗ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾನಿಲಯದ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಆರಂಭವಾದ ಎರಡು ದಿನಗಳ ರಾಜ್ಯ ಮಟ್ಟದ ಕಥಾಕೀರ್ತನ ರಸಗ್ರಹಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಭಾರತೀಯ ಸಂಸ್ಕೃತಿಯನ್ನು ಕತ್ತಲಿನಿಂದ ಬೆಳಕಿನೆಡೆಗೆ ಚಲಿಸುವ ಪರಿಕಲ್ಪನೆಯೆಂದು ಅರ್ಥೈಸಲಾಗುತ್ತದೆ. ಅದು ಕತ್ತಲನ್ನೂ ಬೆಳಕನ್ನಾಗಿಸುವ ಕ್ರಿಯೆ ಆಗಬೇಕು. ಅಂಥ ಶಕ್ತಿ ಕಥಾಕೀರ್ತನೆಯ ಪ್ರಕಾರಕ್ಕಿದೆ ಎಂದರು.

ಪ್ರಾಚೀನ ಸಮಾಜದಲ್ಲಿ ವಿದ್ಯೆ ಸಮಾಜದ ಒಂದು ವರ್ಗಕ್ಕೆ ಸೀಮಿತವಾಗಿತ್ತು. ಶಿಕ್ಷಣದ ಫಲ ಜನಸಾಮಾನ್ಯರಿಗೂ ಲಭ್ಯವಾಗುವಂತೆ ಮಾಡಿದ್ದು ಹರಿಕಥೆ. ಅದನ್ನು ಉಳಿಸಿಬೆಳೆಸಿಕೊಂಡು ಹೋಗುವುದು ಇಂದಿನ ಅನಿವಾರ್ಯತೆ ಎಂದರು.

ಕಥಾಕೀರ್ತನೆಕಾರರು ಬಹುಮುಖ ಪ್ರತಿಭೆಯುಳ್ಳವರು. ಅವರು ಏಕಕಾಲಕ್ಕೆ ಕವಿ, ಸಾಹಿತಿ, ಸಂಗೀತಕಾರ, ನೃತ್ಯಪಟು, ಅಭಿನಯ ಚತುರರೂ ಆಗಿರಬೇಕು. ಅಂಥವರ ಪರಂಪರೆಯನ್ನು ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಮಾರಂಭವನ್ನು ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎನ್. ಬಿ. ನಡುವಿನಮನಿ ಮಾತನಾಡಿ, ಹರಿಕಥೆ ಒಂದು ಪ್ರಾಚೀನ ಕಲೆಯಾದರೂ ಆಧುನಿಕ ಕಾಲದಲ್ಲೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ ಎಂದರು.

ಕಥಾಕೀರ್ತನೆ ಶಾಸ್ತ್ರ ಹಾಗೂ ಜನಪದದ ಮಿಶ್ರಣ. ಕಾವ್ಯಗಳನ್ನು ಓದುವ ಪದ್ಧತಿಯಿಂದ ಜನಸಾಮಾನ್ಯರು ಕೇಳುವ ವ್ಯವಸ್ಥೆಗೆ ಬದಲಾಯಿಸಿದ ಹಿರಿಮೆ ಅದರದ್ದು. ಅದನ್ನು ಉಳಿಸಿಬೆಳೆಸುವ ಹೊಣೆ ಯುವಜನಾಂಗಕ್ಕಿದೆ ಎಂದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಟಿ. ಜಿ.  ನರಸಿಂಹಮೂರ್ತಿ ಪ್ರಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಸಿ. ವಿ. ಮಹದೇವಯ್ಯ, ಕೀರ್ತನ ರಂಗ ಬಳಗದ ಸಂಸ್ಥಾಪಕ ನರಸಿಂಹದಾಸ್, ತುಮಕೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ. ಡಿ. ವಿ. ಪರಮಶಿವಮೂರ್ತಿ ಉಪಸ್ಥಿತರಿದ್ದರು. ಡಾ. ಅಣ್ಣಮ್ಮ ವಂದಿಸಿದರು. ಪದ್ಮನಾಭ ಕೆ. ವಿ. ಕಾರ್ಯಕ್ರಮ ನಿರೂಪಿಸಿದರು.

Saturday, January 24, 2015

ತುಮಕೂರು ವಿ.ವಿ. 8ನೇ ಘಟಿಕೋತ್ಸವ: ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್

ಜನವರಿ 24, 2015ರಂದು ಜರುಗಿದ ತುಮಕೂರು ವಿಶ್ವವಿದ್ಯಾನಿಲಯದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ. ಎ. ಎಸ್. ಕಿರಣ್ ಕುಮಾರ್, ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮು ಹಾಗೂ ಕನ್ನಡದ ಹಿರಿಯ ಬರಹಗಾರ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆದ ಶ್ರೀ ವಜುಭಾಯಿ ವಾಲಾ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿಯಿತ್ತು ಗೌರವಿಸಿದರು.
ಹಿರಿಯ ವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮು ಅವರಿಗೆ ಗೌರವ ಡಾಕ್ಟರೇಟ್

ಇಸ್ರೋ ಅಧ್ಯಕ್ಷ ಡಾ. ಎ. ಎಸ್. ಕಿರಣ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್
ಈ ಘಟಿಕೋತ್ಸವದಲ್ಲಿ ಒಬ್ಬ ಅಭ್ಯರ್ಥಿ ಡಿ.ಲಿಟ್., ಒಬ್ಬ ಅಭ್ಯರ್ಥಿ ಪಿಎಚ್.ಡಿ., 1208 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 7297 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಿದ್ದರು. ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ‍್ಯಾಂಕುಗಳನ್ನು, ಬಿಎ/ಬಿಎಸ್‌ಡಬ್ಲ್ಯೂ/ಬಿಎಸ್‌ಸಿ/ಬಿಸಿಎ/ಬಿಕಾಂ/ ಬಿಬಿಎಂ/ಬಿಇಡಿ (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ‍್ಯಾಂಕುಗಳನ್ನು, ಬಿಎಫ್‌ಎ (ಸೆಮಿಸ್ಟರ್ ಪದ್ಧತಿ)ಗೆ ಐದು ರ‍್ಯಾಂಕುಗಳನ್ನು ಬಿ.ಪಿ.ಇಡಿ (ಸೆಮಿಸ್ಟರ್ ಪದ್ಧತಿ) ಹಾಗೂ ಬಿಎ (ವಾರ್ಷಿಕ ಪದ್ಧತಿ)ಗಳಿಗೆ ತಲಾ ಐದು ರ‍್ಯಾಂಕುಗಳನ್ನು, ಬಿಕಾಂ (ವಾರ್ಷಿಕ ಪದ್ಧತಿ)ಗೆ ಮೂರು ರ‍್ಯಾಂಕುಗಳನ್ನು ಹಾಗೂ ಬಿಎ ಇಂಟಗ್ರೇಟೆಡ್ ಕನ್ನಡ ಪಂಡಿತ್‌ಗೆ ಮೂರು ರ‍್ಯಾಂಕುಗಳನ್ನು ನೀಡಲಾಯಿತು. ನಾಡಿನ ವಿವಿಧ ದಾನಿಗಳು ಸ್ಥಾಪಿಸಿರುವ ದತ್ತಿನಿಧಿಗಳ 56 ಚಿನ್ನದ ಪದಕಗಳೂ ಸೇರಿದಂತೆ ಒಟ್ಟು 73 ಚಿನ್ನದ ಪದಕಗಳನ್ನು ಹಾಗೂ ನಾಲ್ಕು ನಗದು ಬಹುಮಾನಗಳನ್ನು ರಾಜ್ಯಪಾಲರು ಪ್ರದಾನ ಮಾಡಿದರು.

ಹಿರಿಯ ಸಾಹಿತಿ ಪ್ರೊ, ಬರಗೂರು ರಾಮಚಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದ ಉಪಾಧ್ಯಕ್ಷ ಪ್ರೊ. ಎಚ್ ದೇವರಾಜ್, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎ. ಎಚ್. ರಾಜಾಸಾಬ್, ಕುಲಸಚಿವ (ಪರೀಕ್ಷಾಂಗ) ಪ್ರೊ. ಎನ್. ಬಿ. ನಡುವಿನಮನಿ, ಅಕಡೆಮಿಕ್ ಕೌನ್ಸಿಲ್ ಹಾಗೂ ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯಗಳ ಡೀನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದ ಉಪಾಧ್ಯಕ್ಷ ಪ್ರೊ. ಎಚ್ ದೇವರಾಜ್ ಮಾಡಿದ ಘಟಿಕೋತ್ಸವ ಭಾಷಣದ ಮುಖ್ಯಾಂಶಗಳು ಇಲ್ಲಿವೆ: 
ಘಟಿಕೋತ್ಸವ ಭಾಷಣ: ಜಿಸಿ ಉಪಾಧ್ಯಕ್ಷ ಪ್ರೊ. ಎಚ್. ದೇವರಾಜ್ 

  • ಶ್ರಮ ಮತ್ತು ಸಾಧನೆ ಇಲ್ಲದ ಬರಿಯ ಆಸೆ ಮತ್ತು ಬಯಕೆ ಎಂದೂ ನಮ್ಮನ್ನು ಸಾಧಕರನ್ನಾಗಿಸುವುದಿಲ್ಲ. ಸಾಧನೆ ಒಂದು ಮಹತ್ವದ ಗುಣ. ಬುದ್ಧಿವಂತಿಕೆ ಎಂಬುದು ಪರಿಶ್ರಮ ಮತ್ತು ಸಹಿಷ್ಟಣತೆ, ಚೈತನ್ಯ ಮತ್ತು ಶೌರ್ಯ, ಸಮಾನತೆ ಮತ್ತು ಪಾಂಡಿತ್ಯವನ್ನು ಸಾಧಿಸಲು ಸಹಾಯಕವಾಗಬೇಕು ನೆನಪಿಡಿ. ನಿಮ್ಮ ಕಲಿಕೆಯ ಪಯಣ ನಿಮ್ಮ ಪದವಿಯೊಂದಿಗೆ ಕೊನೆಗೊಳ್ಳುವುದಿಲ್ಲ; ಬದಲಿಗೆ ಪ್ರಾರಂಭವಾಗುತ್ತದೆ. ನೀವು ಇಂದು ಏನನ್ನು ಕಲಿತೀದ್ದೀರೋ ಅದು ನಾಳೆಗೆ ಹಳೆಯದಾಗಿರುತ್ತದೆ. ಆದ್ದರಿಂದ ನಿಮ್ಮ ಜ್ಞಾನವನ್ನು ಸದಾಕಾಲ ವೃದ್ಧಿಸಿಕೊಳ್ಳಿ. 
  • ಶಿಕ್ಷಣವೆಂಬುದು ಜನರನ್ನು ಅಭಿವೃದ್ಧಿಪಡಿಸುವ ಮತ್ತು ಸಬಲಗೊಳಿಸುವ ಮೊಟ್ಟಮೊದಲ ಸಾಧನ. ಸಾಮಾಜಿಕ ಸಂಸ್ಥೆಗಳ ಗುಣಮಟ್ಟ ಶಿಕ್ಷಣದಿಂದ ಹುಟ್ಟಿದ ಸಾಮರ್ಥ್ಯವನ್ನು ಅವಲಂಬಿಸಿದೆ. ಜ್ಞಾನ ಸಂಪಾದಕರು ಮಾತ್ರ ನಿಜವಾದ ಹೊಸತನವನ್ನು ತರಲು ಸಾಧ್ಯ. ಇದರಲ್ಲಿ ವಿಶ್ವವಿದ್ಯಾನಿಲಯಗಳು ಚಿಂತನಶೀಲರಾದ ಮತ್ತು ಕಾರ್ಯೋನ್ಮುಖರಾದ ಯುವಜನರನ್ನು ತರಬೇತುಗೊಳಿಸುವ ಪ್ರಯೋಗಾಲಯಗಳಿದ್ದಂತೆ. 
  • ಭಾರತೀಯ ಸಂಪ್ರದಾಯದ ಪ್ರಕಾರ ಶಿಕ್ಷಣ ಎಂಬುದು ಕೇವಲ ಜೀವನ ನಡೆಸುವ ಸಲುವಾಗಿ ಕಲಿಯುವ ಕಸುಬು ಮಾತ್ರವಲ್ಲ. ಅದು ಜೀವನ ನಡೆಸಲು ಬೇಕಾದ ಆತ್ಮಜ್ಞಾನಕ್ಕೆ ಸ್ಪೂರ್ತಿ ನೀಡುವಂತೆಯೂ ಇರಬೇಕು. ಸತ್ಯ ಹಾಗೂ ಶೀಲದ ಬಗ್ಗೆ ಮಾನವರಿಗೆ ದೀಕ್ಷೆ ನೀಡುವಂತೆ ಇರಬೇಕು. ಶಿಕ್ಷಣ ಎನ್ನುವುದು ವೈಯಕ್ತಿಕ ಏಳ್ಗೆ ಮತ್ತು ಸಾಮಾಜಿಕ ಅಭಿವೃದ್ಧಿ ಎರಡಕ್ಕೂ ಪೂರಕವಾಗಿರಬೇಕು. ನಮ್ಮ ಬುದ್ಧಿಯನ್ನು ನಿಶಿತಗೊಳಿಸಿ, ನಮ್ಮ ಅನುಭವವನ್ನು ಸೂಕ್ಷ್ಮಗೊಳಿಸಿ, ನಮ್ಮ ಭಾವನಾ ಪ್ರಪಂಚವನ್ನು ವಿಸ್ತರಿಸುಂತಿರಬೇಕು. ಒಟ್ಟಿನಲ್ಲಿ ಮನುಷ್ಯರು ಸಂಪೂರ್ಣ ಬದುಕನ್ನು ಬದುಕಲು, ಒಳಿತನ್ನು ಸಾಧಿಸಲು ಅನುವು ಮಾಡಬೇಕು. ವಿದ್ಯೆಯ ಗುರಿ ಎಂದರೆ, ಪ್ರಪಂಚದ ಬಗೆಗಿನ ಒಂದು ಸುಸಂಬದ್ಧವಾದ ಚಿತ್ರಣವನ್ನು ಬೆಳೆಸುವುದು. 
  • ಬದುಕಿನ ಮೂಲಭೂತ ಆದರ್ಶಗಳು, ಸತ್ಯಾನ್ವೇಷಣೆಯ ತವಕ ಮತ್ತು ಆಚಾರವಂತಿಕೆಗಳನ್ನು ಪುಸ್ತಕಗಳಲ್ಲಿ ಬರೆದು ಅಂಕುರಿಸಲಾಗುವುದಿಲ್ಲ. ನಮ್ಮ ಆದರ್ಶಗಳು ಮತ್ತು ದೇಶಾಭಿಮಾನ ನಮ್ಮ ಆಚಾರಗಳಲ್ಲಿ ಒಡಮೂಡಬೇಕೇ ವಿನಾ ಬರೀ ಮಾತುಗಳಲ್ಲಲ್ಲ. ಹಾಗಾಗಿ ವಿಶ್ವವಿದ್ಯಾನಿಲಗಳು ಉದಾರ ಮನೋಭಾವದ ಶಿಕ್ಷಣವನ್ನೂ, ಉನ್ನತ ವೈಜ್ಞಾನಿಕ ಸಂಶೋಧನೆಯನ್ನೂ ಜೊತೆಜೊತೆಗೇ ನೀಡಬೇಕು. 
  • ವೃತ್ತಿಪರ ಶಿಕ್ಷಣ ಮತ್ತು ಸಾಂಸ್ಕೃತಿಕ ಜ್ಞಾನ, ವೈಜ್ಞಾನಿಕ ತಿಳುವಳಿಕೆ ಮತ್ತು ತಾತ್ವಿಕತೆ, ತಾಂತ್ರಿಕ ಕ್ಷಮತೆ ಮತ್ತು ಆಧ್ಯಾತ್ಮಿಕ ಸಾಧನೆ ಎಲ್ಲವನ್ನೂ ಒಟ್ಟೊಟ್ಟಿಗೆ ಸಾಧ್ಯವಾಗಿಸುವ ಜವಾಬ್ದಾರಿ ನಮ್ಮ ವಿಶ್ವವಿದ್ಯಾನಿಲಯಗಳ ಮೇಲಿದೆ. ಜೀವನ ನಡೆಸುವುದಕ್ಕೂ ಮತ್ತು ಬದುಕಲು ಕಲಿಯುವುದಕ್ಕೂ ಹೀಗೆ ಎರಡಕ್ಕೂ ಆಗಿಬರಬೇಕಾದ ಶಿಕ್ಷಣವನ್ನು ನಾವು ನೀಡಬೇಕಿದೆ. ಯುವಕರನ್ನು ಕಲಿಕೆಯ ವಾತಾವರಣದಿಂದ ಕಸುಬಿನ ವಾತಾವರಣಕ್ಕೆ ಒಗ್ಗಿಸುವ ತಾಲೀಮನ್ನೂ ಒದಗಿಸುವುದು ವಿಶ್ವವಿದ್ಯಾನಿಲಯಗಳ ಜವಾಬ್ದಾರಿ.

Friday, January 23, 2015

ಡಾ. ಎ. ಎಸ್. ಕಿರಣ್ ಕುಮಾರ್, ಟಿ. ಆರ್. ಅನಂತರಾಮು, ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್

ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಅಧ್ಯಕ್ಷ ಶ್ರೀ ಎ. ಎಸ್. ಕಿರಣ್ ಕುಮಾರ್,  ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಸಂಸ್ಥೆಯ ನಿವೃತ್ತ ಹಿರಿಯ ವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮು ಹಾಗೂ ಹಿರಿಯ ಬರಹಗಾರ ಮತ್ತು ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಗಳನ್ನು ಘೋಷಿಸಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಕನ್ನಡಿಗ ಕಿರಣ್ ಕುಮಾರ್ ಅವರಿಗೆ, ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಶ್ರೀ ಅನಂತರಾಮು ಅವರಿಗೆ, ಸಾಹಿತ್ಯ ಮತ್ತು ಸೃಜನಶೀಲ ಮಾಧ್ಯಮ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಪ್ರೊ. ಬರಗೂರು ಅವರಿಗೆ ಈ ಗೌರವ ಸಲ್ಲುತ್ತಿದೆ. ಜನವರಿ 24, 2015ರಂದು ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ನಡೆಯಲಿರುವ ವಿಶ್ವವಿದ್ಯಾನಿಲಯದ 8ನೇ ಘಟಿಕೋತ್ಸವದಲ್ಲಿ ಈ ಪದವಿಗಳನ್ನು ಪ್ರದಾನ ಮಾಡಲಾಗುವುದು. ಇದು ತುಮಕೂರು ವಿ.ವಿ.ಯ ದಶಮಾನೋತ್ಸವ ವರ್ಷ ಎಂಬುದು ಇಲ್ಲಿ ಉಲ್ಲೇಖನೀಯ.

ಡಾ. ಎ. ಎಸ್. ಕಿರಣ್ ಕುಮಾರ್ : ಹಾಸನ ಜಿಲ್ಲೆಯ ಆಲೂರಿನವರಾದ ಡಾ. ಎ. ಎಸ್. ಕಿರಣ್ ಕುಮಾರ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್‍ಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್‍ಸಿ (ಎಲೆಕ್ಟ್ರಾನಿಕ್ಸ್) ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಎಂ.ಟೆಕ್ ಪದವಿ ಪಡೆದರು. 1975ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ)ದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಕಿರಣ್ ಕುಮಾರ್ ಅಲಹಾಬಾದಿನ ಸ್ಪೇಸ್ ಅಪ್ಲಿಕೇಶನ್ ಸೆಂಟರ್‍ನ ನಿರ್ದೇಶಕರಾಗಿ ಇಸ್ರೋದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-1’ ಹಾಗೂ ‘ಮಂಗಳಯಾನ’ (ಮಾಮ್) ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಮೊಟ್ಟಮೊದಲ ದೂರಸಂವೇದಿ ಉಪಗ್ರಹ ‘ಭಾಸ್ಕರ’ದ ಯಶಸ್ಸಿನಲ್ಲೂ ಅವರ ಕೊಡುಗೆ ಗಣನೀಯ. ಇದೇ ಜನವರಿ 12ರಿಂದ ಇಸ್ರೋದ ನೂತನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಕನ್ನಡಿಗ ಕಿರಣ್ ಕುಮಾರ್ ಅವರು ಭಾರತ ಸರ್ಕಾರದ ಪ್ರತಿಷ್ಠಿತ ‘ಪದ್ಮಶ್ರೀ’ ಪುರಸ್ಕೃತರೂ ಆಗಿದ್ದಾರೆ.

ಶ್ರೀ ಟಿ. ಆರ್. ಅನಂತರಾಮು: ತುಮಕೂರಿನ ಸಿರಾ ತಾಲೂಕಿನವರಾದ ಹಿರಿಯ ವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮು ತುಮಕೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಹಳೆವಿದ್ಯಾರ್ಥಿಯೂ ಆಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಭೂವಿಜ್ಞಾನದಲ್ಲಿ ಎಂ.ಎಸ್‍ಸಿ ಪದವಿ ಪಡೆದ ಅವರು 1977ರಲ್ಲಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಹಿರಿಯ ವಿಜ್ಞಾನಿಯಾಗಿ ನಿವೃತ್ತರಾಗಿರುವ ಅನಂತರಾಮು ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಬೆಳೆಸುವಲ್ಲಿ ನೀಡಿರುವ ಕೊಡುಗೆ ಅಪಾರ. ಕನ್ನಡದಲ್ಲಿ ನೂರಕ್ಕೂ ಹೆಚ್ಚು ವಿಜ್ಞಾನ ಸಂಬಂಧೀ ಕೃತಿಗಳನ್ನು ರಚಿಸಿರುವ ಅವರು ಜೆ. ಡಿ. ಬರ್ನಾಲ್ ಅವರ ‘ಸೈನ್ಸ್ ಇನ್ ಹಿಸ್ಟರಿ’ ಬೃಹತ್ ಗ್ರಂಥದ ಕನ್ನಡ ಅನುವಾದದಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಪುರಸ್ಕಾರಗಳು ಅವರಿಗೆ ಸಂದಿವೆ.

ಪ್ರೊ. ಬರಗೂರು ರಾಮಚಂದ್ರಪ್ಪ: ತುಮಕೂರು ಜಿಲ್ಲೆಯ ಬರಗೂರಿನವರಾದ ರಾಮಚಂದ್ರಪ್ಪರವರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಹಳೆವಿದ್ಯಾರ್ಥಿಯೂ ಆಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಮುಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ಸಂಶೋಧಕ, ಸಂಸ್ಕೃತಿ ಚಿಂತಕರಾಗಿ ಪ್ರಸಿದ್ಧರಾಗಿರುವ ಬರಗೂರು ರಾಮಚಂದ್ರಪ್ಪನವರು ಸಿನಿಮಾ ಕ್ಷೇತ್ರಕ್ಕೂ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಿರ್ದೇಶನದ ಸೂರ್ಯ, ಕರಡೀಪುರ, ಶಾಂತಿ ಚಲನಚಿತ್ರಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿವೆ. ತಮ್ಮ ಸಾಹಿತ್ಯ-ಸಂಸ್ಕೃತಿ ಸೇವೆಗಾಗಿ ಪ್ರೊ. ಬರಗೂರು ಅವರು ಪ್ರತಿಷ್ಠಿತ ‘ಪಂಪ ಪ್ರಶಸ್ತಿ’, ‘ನೃಪತುಂಗ ಪ್ರಶಸ್ತಿ’ ಮತ್ತು ‘ನಾಡೋಜ ಪ್ರಶಸ್ತಿ’ಗಳಿಂದ ಪುರಸ್ಕೃತರಾಗಿದ್ದಾರೆ.